ಕೂಡಿ ಬಂದ ಲಾಭಾಂಶ	

	ಕೂಡಿ ಬಂದ ಲಾಭಾಂಶ (ಅಕ್ಯೂಮಿಲೇಟೆಡ್ ಡಿವಿಡೆಂಡ್) ಎಂದರೆ ಒಂದು ಕಂಪನಿ, ಸಹಕಾರ ಬ್ಯಾಂಕ್ ಅಥವಾ ಸೊಸೈಟಿಯು ತನ್ನ ಪ್ರಸಕ್ತ ವರ್ಷದ ನಿವ್ವಳ ಲಾಭದಲ್ಲಿ  ಶಾಸನ ಬದ್ಧ ನಿಧಿಗಳಿಗೆ ವರ್ಗಾಯಿಸಿದ ನಂತರದ ನಿವ್ವಳ ಲಾಭವನ್ನು ಇರುವ ಎಲ್ಲ ಅರ್ಹ ಸದಸ್ಯರಿಗೆ ಲಾಭಾಂಶವಾಗಿ ಹಂಚುವುದು ಕಂಪನಿ ಕಾಯಿದೆ, ಸಹಕಾರ ಕಾಯಿದೆಗಳ ಪ್ರಕಾರ ಶಾಸನಬದ್ಧ ನಿರ್ಬಂಧವಾಗಿದೆ.  ಕಂಪನಿಗಳು ಸದರಿ ಸದಸ್ಯರಿಗೆ ಪೂರ್ವಾನುಮತಿಯಂತೆ ಅವರವರ ಪಾಲಿನ ಲಾಭಾಂಶವನ್ನು  ಚೆಕ್ಕುಗಳ ಮೂಲಕ ಅವರವರ ವಿಳಾಸಕ್ಕೆ ಕಳಿಸಿಬಿಡುತ್ತವೆ. ಅವರುಗಳು ಅದನ್ನು ತಮ್ಮ ತಮ್ಮ ಬ್ಯಾಂಕಿನ ಖಾತೆಗಳಲ್ಲಿ ಜಮಾಮಾಡಿಕೊಂಡು ಹಣ ಪಡೆಯಬಹುದು. ಈ ಲಾಭಾಂಶ ಪಾವತಿ ಚೆಕ್ಕುಗಳು (ಡಿವಿಡೆಂಡ್ ವಾರೆಂಟ್ಸ್) ಮೂರು ತಿಂಗಳುಗಳ ಅವಧಿಗೆ ಮಾತ್ರ ಜೀವಂತವಾಗಿದ್ದು ನಂತರ ಅವು ಹಳತು(ಸ್ಟೇಲ್) ಎನ್ನಿಸಿಕೊಳ್ಳುತ್ತವೆ. ಹಾಗೆ ಹಳತಾದ ಲಾಭಾಂಶ ಚೆಕ್ಕುಗಳನ್ನು ಕಂಪನಿಗೆ ಕಳುಹಿಸಿ ನವೀಕರಿಸಿಕೊಳ್ಳಬಹುದಾಗಿದೆ (ರಿವ್ಯಾಲಿಡೇಷನ್). ಸಾಮಾನ್ಯವಾಗಿ ಈ ಲಾಭಾಂಶದ ಚೆಕ್ಕುಗಳು ಎಲ್ಲೆಡೆಯೂ ಪೂರ್ಣಮೊತ್ತವನ್ನು  ಪಾವತಿಸುವ ಷರತ್ತು (ಪೇಯಬಲ್ ಅಟ್ ಪಾರ್) ಇರುವುದರಿಂದ ದೇಶದ ಎಲ್ಲೆಡೆಯೂ ಇದನ್ನು ಬ್ಯಾಂಕಿನ ಖಾತೆಗೆ ಜಮಾಮಾಡಿಕೊಳ್ಳಬಹುದಾಗಿದೆ.  ಹಲವಾರು ಕಾರಣಗಳಿಂದ ಈ ಲಾಭಾಂಶ ಚೆಕ್ಕುಗಳು ಪಾವತಿಯಾಗದೆಯೋ, ವಿಳಾಸ ಕಾರಣದಿಂದ ಹಿಂತಿರುಗಿ ಬಂದಿರುವುದೋ ಆಗಿದ್ದಲ್ಲಿ ಅವುಗಳನ್ನು ಕೇಳಿ ಪಡೆಯದ ಲಾಭಾಂಶ (ಅನ್‍ಕ್ಲೇಮ್ಡ್ ಡಿವಿಡೆಂಡ್)ವೆಂಬ ಪ್ರತ್ಯೇಕ ಖಾತೆಯಲ್ಲಿಟ್ಟು ಆಸ್ತಿ-ಹೊಣೆ ತಃಖ್ತೆಯಲ್ಲಿ ಜವಾಬ್ದಾರಿಗಳು (ಲಯಬಿಲಿಟೀಸ್ ಸೈಡ್ ಆಫ್ ಬ್ಯಾಲೆನ್ಸ್ ಷೀಟ್) ಎಂದು ತೋರಿಸಲಾಗುವುದು. 

	ಆದರೆ ಸಹಕಾರ ಬ್ಯಾಂಕುಗಳು ಹಾಗು ಸೊಸೈಟಿಗಳಿಗೆ ಈ ರೀತಿಯ ಪಾವತಿಗೆ ಪೂರ್ವಾನುಮತಿ ಇರುವುದಿಲ್ಲ.  ಸದಸ್ಯರುಗಳು ತಮ್ಮ ಲಾಭಾಂಶವನ್ನು ತಮ್ಮ ಬ್ಯಾಂಕಿನಿಂದಲೋ, ಸೊಸೈಟಿ ಕಛೇರಿಯಿಂದಲೋ ಪಡೆದುಕೊಳ್ಳಬೇಕಾಗಿರುತ್ತದೆ.  ಹೀಗಾಗಿ ಸಾಮಾನ್ಯವಾಗಿ ಎಲ್ಲ ಸದಸ್ಯರೂ ತಮ್ಮ ಹೆಸರಿನಲ್ಲಿ ಒಂದು ಉಳಿತಾಯ ಖಾತೆಯನ್ನು ಬ್ಯಾಂಕಿನಲ್ಲಿ / ಸೊಸೈಟಿಯಲ್ಲಿ ತೆರೆದಿರುತ್ತಾರೆ.  ಅವರವರ ಪಾಲಿನ ಲಾಭಾಂಶವನ್ನು ಖಾತೆಗೆ ವರ್ಗಾಯಿಸಲು ಕೇಳುತ್ತಾರೆ; ಕೆಲವರು ಅದನ್ನು ನಗದಾಗಿ ಪಡೆಯುತ್ತಾರೆ.  ಆದರೆ ಬ್ಯಾಂಕಿಗೆ ಸಾಲ-ಬಡ್ಡಿ ಬಾಕಿ ಇಟ್ಟಿರುವ ಸದಸ್ಯರ ಪಾಲಿನ ಲಾಭಾಂಶವನ್ನು ಆ ಸಾಲದ ಬಾಕಿಗೆ ನೇರವಾಗಿ ಜಮಾ ಹಾಕಿಕೊಳ್ಳುವ ಅಧಿಕಾರ ಬ್ಯಾಂಕಿಗೆ/ಸೊಸೈಟಿಗೆ ಇರುತ್ತದೆ. ಹೀಗಾಗಿ ಅಂತಹವರ ಲಾಭಾಂಶವು ನೇರವಾಗಿ ಸಾಲಕ್ಕೆ ಜಮವಾಗಿಬಿಡುತ್ತದೆ.  
 (ಕೆ.ಜಿ.ಆರ್.)
(ಪರಿಷ್ಕರಣೆ: ಜಿ.ಆರ್.ವಿ; ವೈ.ಕೆ)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ